WELCOME TO NAMO BRIGADE SHAHABAD OFFICIAL WEBSITE

ನರೇಂದ್ರ ಮೋದಿ-ಜಿನ್‌ಪಿಂಗ್‌ ಭೇಟಿ: ಪಾಕಿಸ್ತಾನಕ್ಕೆ ಇರಿಸುಮುರಿಸು

ನರೇಂದ್ರ ಮೋದಿ-ಜಿನ್‌ಪಿಂಗ್‌ ಭೇಟಿ: ಪಾಕಿಸ್ತಾನಕ್ಕೆ ಇರಿಸುಮುರಿಸು

ಏಪ್ರಿಲ್ 28: ಯುದ್ಧಪೀಡಿತ ಆಫ್ಘಾನಿಸ್ತಾನದಲ್ಲಿ ಜಂಟಿ ಆರ್ಥಿಕ ಕಾರ್ಯಯೋಜನೆ ನಡೆಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪರಸ್ಪರ ಒಪ್ಪಿಗೆ ಸೂಚಿಸಿದ್ದಾರೆ.
ಭಾರತದ ವಿರುದ್ಧದ ತನ್ನ ವೈರತ್ವಕ್ಕೆ ಚೀನಾ ಗೆಳೆತನದ ಲಾಭ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಪಾಕಿಸ್ತಾನಕ್ಕೆ ಈ ಯೋಜನೆಯಿಂದ ಇರಿಸುಮುರಿಸು ಉಂಟಾಗುವ ಸಾಧ್ಯತೆ ಇದೆ. ಚೀನಾವು ಭಾರತದ ಆಕ್ಷೇಪದ ನಡುವೆಯೇ ಪಾಕಿಸ್ತಾನದಲ್ಲಿ ಆರ್ಥಿಕ ಕಾರಿಡಾರ್ ನಿರ್ಮಾಣ ಮಾಡುತ್ತಿದೆ.
ಚೀನಾಕ್ಕೆ ಅನೌಪಚಾರಿಕ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಎರಡನೆಯ ದಿನವಾದ ಶನಿವಾರ ಜಿನ್‌ಪಿಂಗ್ ಅವರೊಂದಿಗೆ ಸಮಾಲೋಚನೆ ಮುಂದುವರಿಸಿದರು. ಮಧ್ಯಾಹ್ನದ ಊಟ ಮುಗಿಸಿದ ಬಳಿಕ ಮೋದಿ ಅವರು ಭಾರತಕ್ಕೆ ಮರಳಿದರು.
ಕ್ಸಿ ಅವರ 'ನವ ಯುಗ' ಮತ್ತು ತಮ್ಮ 'ನವ ಭಾರತ' ಎರಡೂ ಒಂದೇ ರೀತಿಯ ಪರಿಕಲ್ಪನೆಗಳಾಗಿವೆ. ಇವುಗಳಿಂದ ಜಾಗತಿಕ ಪ್ರಯೋಜನವಾಗಲಿದೆ ಎಂದು ಮೋದಿ ಹೇಳಿದರು.

ಪ್ರಧಾನಿ ಮೋದಿ ಅವರ ಪ್ರವಾಸದ ಎರಡನೆಯ ದಿನದ ಮಾಹಿತಿ ಇಲ್ಲಿದೆ

ಸರೋವರದಲ್ಲಿ ವಾಯುವಿಹಾರ

ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ವುಹಾನ್ ನಗರದಲ್ಲಿರುವ ಈಸ್ಟ್ ಲೇಕ್‌ನಲ್ಲಿ ಭೇಟಿ ಮಾಡಿದ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸರೋವರದ ತೀರದಲ್ಲಿ ಸ್ವಲ್ಪ ಹೊತ್ತು ವಾಯುವಿಹಾರ ಮಾಡಿದರು. ಈ ವೇಳೆ ಜಿನ್‌ಪಿಂಗ್ ಅವರು ಮುಂದಿನ ವರ್ಷ ಚೀನಾದಲ್ಲಿ ನಡೆಯಲಿರುವ ಶೃಂಗಸಭೆಗೆ ಪ್ರಧಾನಿಯನ್ನು ಆಹ್ವಾನಿಸಿದರು. ಬಳಿಕ ಸರೋವರದಲ್ಲಿ ಬೋಟ್‌ನಲ್ಲಿ ವಿಹಾರ ನಡೆಸಿದರು. ಈ ವೇಳೆ 2019ರಲ್ಲಿ ಭಾರತಕ್ಕೆ ಭೇಟಿ ನೀಡಿ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಜಿನ್‌ಪಿಂಗ್ ಅವರಿಗೆ ಮೋದಿ ಆಹ್ವಾನ ನೀಡಿದರು.

ಏಷ್ಯಾ ನಿರ್ಮಾಣದ ಸಂಗಾತಿ

ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗಾಗಿ ನಾವು ಸಕಾರಾತ್ಮಕ ಕೊಡುಗೆಗನ್ನು ನೀಡಬೇಕಿದೆ. ಭವಿಷ್ಯದಲ್ಲಿ ಪದೇ ಪದೇ ಈ ರೀತಿ ನಾವು ಭೇಟಿ ಮಾಡಲಿದ್ದೇವೆ ಎಂದು ನಾನು ನಂಬಿದ್ದೇನೆ. ನಿಮ್ಮೊಂದಿಗೆ ಇನ್ನಷ್ಟು ಗಾಢವಾದ ಸಂವಹನ ಸಂಪರ್ಕ ಹೊಂದಲು ಬಯಸುತ್ತೇನೆ. ಸ್ಥಿರತೆ, ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ಒಳಗೊಂಡ 21ನೇ ಶತಮಾನದ ಏಷ್ಯಾದ ನಿರ್ಮಾಣಕ್ಕೆ ನಿಮ್ಮ ಸಹಭಾಗಿತ್ವವನ್ನು ಹೊಂದೋಣ ಎಂದು ಜಿನ್‌ಪಿಂಗ್‌ ಹೇಳಿದರು.

ಜಗತ್ತಿನ ಆರ್ಥಿಕತೆಯ ಅರ್ಧಪಾಲು

2000 ವರ್ಷಗಳ ಇತಿಹಾಸದಲ್ಲಿ ಭಾರತ ಮತ್ತು ಚೀನಾಗಳು ಜಾಗತಿಕ ಆರ್ಥಿಕತೆಯಲ್ಲಿ ಅತ್ಯಂತ ಮಹತ್ವದ ಕೊಡುಗೆ ನೀಡಿವೆ. ವಿಶ್ವ ಆರ್ಥಿಕತೆಯಲ್ಲಿ ಈ ಎರಡು ದೇಶಗಳದ್ದೇ ಶೇ 50 ಪಾಲಿದೆ. ಉಳಿದ ಶೇ 50 ಪಾಲು ಜಗತ್ತಿನ ಉಳಿದ ದೇಶಗಳದ್ದು. 1600 ವರ್ಷಗಳಲ್ಲಿ ಈ ದೇಶಗಳ ಅಪಾರ ಪ್ರಭಾವ ಬೀರಿವೆ. ಜತೆಗೆ ಜಗತ್ತಿನ ಜನಸಂಖ್ಯೆಯ ಶೇ 40ರಷ್ಟು ಪಾಲನ್ನು ಹಂಚಿಕೊಂಡಿದ್ದೇವೆ. ಇದು ಇಬ್ಬರು ನಾಯಕರ ಭೇಟಿ ಮಾತ್ರವಲ್ಲ, ಇತಿಹಾಸ ಮತ್ತು ಸಾಂಸ್ಕೃತಿಕ ಭವ್ಯ ಪರಂಪರೆಯ ಧ್ಯೋತಕ ಎಂದು ಜಿನ್‌ಪಿಂಗ್ ಹೇಳಿದರು.

ಭಯೋತ್ಪಾದನೆಯೇ ದೊಡ್ಡ ಸಮಸ್ಯೆ

ಉಭಯ ದೇಶಗಳ ನಾಯಕರು ಜಾಗತಿಕ ಹವಾಮಾನ ವೈಪರೀತ್ಯ ಮತ್ತು ಅದನ್ನು ಎದುರಿಸಲು ಇರುವ ಸಾಧ್ಯತೆಗಳನ್ನು ಬಳಸಿಕೊಳ್ಳಲು ಜಾಗತಿಕ ಪ್ರಯತ್ನದ ಕುರಿತು ಮಾತುಕತೆ ನಡೆಸಿದರು. ಭಯೋತ್ಪಾದನೆ ಬಹುದೊಡ್ಡ ಸವಾಲಾಗಿದೆ. ಅದರ ವಿರುದ್ಧದ ಹೋರಾಟಕ್ಕೆ ಸಹಕಾರವನ್ನು ವೃದ್ಧಿಸಬೇಕಿದೆ ಎಂದು ಚರ್ಚಿಸಲಾಯಿತು.

ಗಡಿ ಸಮಸ್ಯೆಗೆ ಪರಿಹಾರ

ಭಾರತ ಮತ್ತು ಚೀನಾ ನಡುವಣ ಗಡಿ ವಿವಾದದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. ನ್ಯಾಯೋಚಿತ ಮತ್ತು ಪರಸ್ಪರ ಸಹಮತದ ಪರಿಹಾರ ಕಂಡುಕೊಳ್ಳಲು ವಿಶೇಷ ಪ್ರಾತಿನಿಧ್ಯದ ಅಗತ್ಯವನ್ನು ಮನಗಾಣಲಾಯಿತು. ಚೀನಾ-ಭಾರತ ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡುವ ಅಗತ್ಯದ ಕುರಿತು ಸಮಾಲೋಚಿಸಿದ ನಾಯಕರು, ಎರಡೂ ದೇಶಗಳ ಸೇನಾಪಡೆಯ ನಡುವೆ ಸಂವಹನ ಬಲಪಡಿಸುವ ಮತ್ತು ವಿಶ್ವಾಸ ಬೆಳೆಸುವ ಮಾರ್ಗಸೂಚಿಗಳನ್ನು ತಯಾರಿಸಲು ನಿರ್ಧರಿಸಲಾಯಿತು.

ಸಿನಿಮಾ ಮಾಡಲು ಬನ್ನಿ

ಮನರಂಜನಾ ಕ್ಷೇತ್ರದಲ್ಲಿಯೂ ಪರಸ್ಪರ ಸಹಕಾರ ಮತ್ತು ಸಹಭಾಗಿತ್ವದ ಯೋಜನೆಯ ಕುರಿತು ಪ್ರಸ್ತಾಪಿಸಲಾಯಿತು. ನಾಣು ಭಾರತದ ಅನೇಕ ಸಿನಿಮಾಗಳನ್ನು ನೋಡಿದ್ದೇನೆ. ಈ ಸಿನಿಮಾ ಕ್ಷೇತ್ರವನ್ನು ವಿಸ್ತರಿಸುವುದು ಅತ್ಯುತ್ತಮ ಯೋಜನೆ. ಭಾರತದ ಇನ್ನಷ್ಟು ಸಿನಿಮಾಗಳು ಚೀನಾಕ್ಕೆ ಬರಬೇಕು, ಅದೇ ರೀತಿ ಚೀನಾದ ಸಿನಿಮಾಗಳು ಹೆಚ್ಚು ಹೆಚ್ಚು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಬೇಕು ಎಂದು ಜಿನ್‌ಪಿಂಗ್ ಹೇಳಿದರು.

ಚೀನಾ ಪತ್ರಿಕೆಗಳಲ್ಲಿ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಚೀನಾದ ಅನೇಕ ಪತ್ರಿಕೆಗಳು ಮಹತ್ವ ನೀಡಿವೆ. ಭವಿಷ್ಯದಲ್ಲಿ ಉತ್ತಮ ಸಹಕಾರದ ಭರವಸೆಯನ್ನು ಈ ಭೇಟಿ ಮೂಡಿಸಿದೆ ಎಂದು ಕೆಲವು ಪತ್ರಿಕೆಗಳು ಶ್ಲಾಘಿಸಿವೆ. ಚೀನಾ ಡೈಲಿ ಡಾಟ್ ಕಾಂ ಪತ್ರಿಕೆಯ ಸಂಪಾದಕೀಯವು ಅನೌಪಚಾರಿಕ ಶೃಂಗಸಭೆಯನ್ನು ನಿರೀಕ್ಷೆಗಳಷ್ಟೇ, ಫಲವಿಲ್ಲ ಎಂದು ಟೀಕಿಸಿದೆ.

Share:

No comments:

Post a Comment

Recent Posts

For Advertisement contact 9008814254